ಡೆಪ್ರೇಟಿಸ್, ಅಗೊಸ್ಟೀನೊ
1813-1887. ಇಟಲಿಯ ಒಬ್ಬ ರಾಜನೀತಿಜ್ಞ. ಧನಿಕ ರೈತಕುಟುಂಬವೊಂದರಲ್ಲಿ 1813ರ ಜನವರಿ 31ರಂದು ಲಾಮ್ಬಾರ್ಡಿಯ ಮೆಟ್ಸಾನ ಕಾರ್ಟಿಯಲ್ಲಿ ಹುಟ್ಟಿದ. 1834ರಲ್ಲಿ ಪವೀಯ ವಿಶ್ವವಿದ್ಯಾಲಯದಲ್ಲಿ ಈತ ನ್ಯಾಯಶಾಸ್ತ್ರ ವಿದ್ಯಾರ್ಥಿಯಾಗಿದ್ದಾಗ ಆಸ್ಟ್ರಿಯನ್ ಸರ್ಕಾರದ ವಿರುದ್ಧ ಇಟಲಿಯ ಸ್ವಾತಂತ್ರ್ಯ ವೀರ ಮ್ಯಾಟ್ಸಿನಿ ನಡೆಸಿದ ವಿಮೋಚನೆಯ ಮಹಾಪ್ರಯತ್ನವೊಂದರಲ್ಲಿ ಈತ ಪಾಲ್ಗೊಂಡಿದ್ದ. ಆ ಮೇಲೆ ಹಲವು ವರ್ಷಗಳ ಕಾಲ ಅವನು ಕುಟುಂಬದ ಆಸ್ತಿಯ ಮೇಲ್ವಿಚಾರಣೆಯಲ್ಲಿ ನಿರತನಾಗಿ, ಆಡಳಿತ ಮತ್ತು ಹಣಕಾಸಿನ ಸಾಮಥ್ರ್ಯ ಬೆಳೆಸಿಕೊಂಡ. ರಾಜಕಾರಣದಲ್ಲಿ ಇವನು ಮ್ಯಾಟ್ಸಿನಿಯ ಅನುಯಾಯಿಯಾಗಿದ್ದ. ವಾಮಪಕ್ಷೀಯ ತೀವ್ರಗಾಮಿಯಾಗಿದ್ದ.

ಡೆಪ್ರೇಟಿಸ್ ಲಾಂಬಾರ್ಡಿಯವನಾದರೂ 1848ರ ಕ್ರಾಂತಿವರ್ಷದಲ್ಲಿ ಟೂರಿನ್ನಿನಲ್ಲಿ ಸಮಾವೇಶಗೊಂಡ ಪೀಡ್ಮಾಂಟ್ ಸಂಸತ್ತನ್ನು ಪ್ರವೇಶಿಸಿದ. ಕಾವೂರಿನ ವಿರುದ್ಧವಾದ ಪಕ್ಷಕ್ಕೆ ಬೆಂಬಲ ನೀಡಿದ. ಮ್ಯಾಟ್ಸಿನಿಯೊಂದಿಗೆ ಇವನ ಸಂಪರ್ಕ ಮುಂದುವರಿಯಿತು. ಈತ ಪತ್ರಿಕೋದ್ಯಮದಲ್ಲಿ ನಿರತನಾಗಿದ್ದ. ಆದರೆ 1853ರಲ್ಲಿ ಇವನ ನಿಲುವು ಬದಲಾಯಿತು. ಲಾಂಬಾರ್ಡಿಯಲ್ಲಿ ಬಂಡಾಯ ಹೂಡಲು ಮ್ಯಾಟ್ಸಿನಿ ಯತ್ನಿಸಿದಾಗ ಅದಕ್ಕೆ ಇವನಿಂದ ವಿರೋಧ ಪ್ರಕಟವಾಯಿತು. ಗಣತಂತ್ರವಾದವನ್ನೇ ತೊರೆದು ಸವಾಯ್ ಮನೆತನದ ಪ್ರಭುತ್ವವನ್ನೊಪ್ಪಲೂ ಈತ ಸಿದ್ಧನಾಗಿದ್ದ. ಆದರೆ ಸಾಮಾನ್ಯವಾಗಿ ಇವನು ಕಾವೂರನ ವಿರುದ್ಧವಾಗಿಯೇ ಇದ್ದ. 1859ರಲ್ಲಿ ಕಾವೂರ್ ರಾಜೀನಾಮೆ ನೀಡಿದ. ಅನಂತರ ಲಾಂಬಾರ್ಡಿಯ ಬ್ರೆಷ ಪ್ರಾಂತ್ಯದ ರಾಜ್ಯಪಾಲನಾದ. ಮರುವರ್ಷ ಗ್ಯಾರಿಬಾಲ್ಡಿ ತನ್ನ ಪರವಾಗಿ ಸಿಸಿಲಿಯ ನಿರಂಕುಶ ಪ್ರಭುವಾಗಿ ಇವನನ್ನು ನೇಮಿಸಿದ. ಆದರೆ ಅಲ್ಲಿ ಇವನು ಕಾವೂರನ ಪರವಾಗಿ ಸಿಸಿಲಿಯನ್ನು ಪೀಡ್ಮಾಂಟಿಗೆ ಸೇರಿಸಲು ಕೆಲಸ ಮಾಡಿದ. ಗ್ಯಾರಿಬಾಲ್ಡಿ ಇದನ್ನು ವಿರೋಧಿಸಿದ್ದರಿಂದ ಡೆಪ್ರೇಟಸ್ ರಾಜೀನಾಮೆ ಕೊಡಬೇಕಾಯಿತು.

1862ರಲ್ಲೂ 1866ರಲ್ಲೂ 1867ರಲ್ಲೂ ಇವನು ಮಂತ್ರಿಯಾಗಿದ್ದ. ಆದರೆ ಇವನಿದ್ದ ಸರ್ಕಾರಗಳು ಯಶಸ್ವಿಯಾಗಲಿಲ್ಲ. 1873ರಲ್ಲಿ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಟ್ಟಾಟ್ಸಿ ತೀರಿಕೊಂಡಾಗ ಡೆಪ್ರೇಟಿಸನಿಗೆ ನಾಯಕತ್ವದ ಸ್ಥಾನ ದೊರಕಿತು. 1876ರಲ್ಲಿ ಮಾರ್ಕೊ ಮಿನ್‍ಗ್ಯಾಟ್ಟಿಯ ಸರ್ಕಾರಕ್ಕೆ ಸಂಸತ್ತಿನಲ್ಲಿ ಸೋಲಾಯಿತು. ಡೆಪ್ರೇಟಿಸನ ಪ್ರಧಾನ ಮಂತ್ರಿತ್ವದಲ್ಲಿ ವಾಮಪಕ್ಷ ಅಧಿಕಾರಕ್ಕೆ ಬಂತು. ಅಲ್ಲಿಂದ ಮುಂದೆ 11 ವರ್ಷ ಕಾಲ ಇಟಲಿಯ ರಾಜಕಾರಣದಲ್ಲಿ ಡೆಪ್ರೇಟಿಸ್ ಪ್ರಭಾವಶಾಲಿಯಾಗಿ ಮುಂದುವರಿದ. ನಡುವೆ ಸ್ವಲ್ಪ ಕಾಲ ಮಾತ್ರ ಇವನು ಅಧಿಕಾರ ಕಳೆದುಕೊಂಡಿದ್ದ. ಸಾಯುವವರೆಗೂ (1887ರ ಜುಲೈ 29) ಇವನು ಅಧಿಕಾರದಲ್ಲಿ ಮುಂದುವರಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

1833ರಲ್ಲಿ ಟ್ರಾನ್ಸ್‍ಫಾರ್ಮಿಸ್ಮೊ (ಪರಿವರ್ತನವಾದ) ಎಂಬ ನೀತಿಯನ್ನು ರೂಪುಗೊಳಿಸಿದ್ದು ಇವನ ಅಧಿಕಾರದ ಗಮನಾರ್ಹ ಸಾಧನೆ. ಸಂಸತ್ತಿನಲ್ಲಿ ತನ್ನ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪಕ್ಷದ ಗುರುತುಚೀಟಿಯನ್ನು ಕಡೆಗಣಿಸಿ ಬಲ ಹಾಗೂ ಎಡ ಪಕ್ಷಗಳೆರಡರಿಂದಲೂ ಮಂತ್ರಿಗಳನ್ನು ಆರಿಸಿಕೊಂಡು ಅಧಿಕಾರದಲ್ಲಿ ಮುಂದುವರಿದದ್ದು ಈ ನೀತಿ. ಇವನಿಗೆ ಈ ಹಿಂದೆ ಕಾವೂರ್ ಮುಂತಾದವರು ಈ ನೀತಿ ಅನುಸರಿಸಿದ್ದರೂ ಅವರು ಡೆಪ್ರೇಟಿಸನ ಹಾಗೆ ಅದನ್ನೊಂದು ತಂತ್ರವನ್ನಾಗಿ ರೂಪಿಸಿರಲಿಲ್ಲ. ಇದು ಇಟಾಲಿಯನ್ ಸಂಸದೀಯ ಪದ್ಧತಿಯ ವೈಶಿಷ್ಟ್ಯವಾಯಿತು. ಪಕ್ಷಗಳು ಮತ್ತು ನೀತಿಗಳಿಗಿಂತ ವ್ಯಕ್ತಿಗಳಿಗೂ ಗುಂಪುಗಳಿಗೂ ಪ್ರಾಮುಖ್ಯ ಉಂಟಾಯಿತು. ಇದರಿಂದ ಮಾನಸಿಕ ಗೊಂದಲವೇ ಉಂಟಾಯಿತು. ಇವನು ತನ್ನ ಹಿಂದಿನವರಿಗಿಂತ ಅಧಿಕವಾಗಿ ಹಲವು ಸುಧಾರಣೆಗಳನ್ನು ತಂದನಾದರೂ ಇವನ ಪರಿವರ್ತನವಾದದಿಂದ ಸಂಸದೀಯ ಉದಾರವಾದ ಭ್ರಷ್ಟಗೊಳ್ಳಲು ಸಹಾಯವಾಯಿತು.
(ಎಸ್.ಎಸ್.ಜೆ.ಎ.)